ಇಂಡಿಯನ್ ರಬ್ಬರ್ ಮರ
ಮೊರೇಸಿ ಕುಟುಂಬದ ಫೈಕಸ್ ಇಲಾಸ್ಟಿಕ ಎಂಬ ಹೆಸರಿನ ದೊಡ್ಡ ಪ್ರಮಾಣದ ನಿತ್ಯಹರಿದ್ವರ್ಣದ ಮರ. 150 ಎತ್ತರ ಬೆಳೆದ ದಾಖಲೆಗಳಿವೆ. ಸಸ್ಯಕ್ಷೀರದಿಂದ (ಲ್ಯಾಟೆಕ್ಸ) ರಬ್ಬರ್ ಉತ್ಪನ್ನವಾಗುತ್ತದೆ. ಮರಕ್ಕೆ ಬೀಳಲುಗಳು, ಬೇರುಗಳು, ವಿಪುಲವಾಗಿವೆ. ಎಲೆಗಳ ಉದ್ದ 5”-10", ಒರಟು, ತೊಗಟೆಯ ಬಣ್ಣ ಬೂದು ಅಥವಾ ಕೆಂಪು ಮಿಶ್ರಿತ ಕಂದು. ಈ ಮರದ ವ್ಯಾಪ್ತಿ ಹಿಮಾಲಯದ ತಪ್ಪಲಿನಲ್ಲಿ, ನೇಪಾಳದಿಂದ ಬರ್ಮದವರೆಗಿನ ತೇವಪೂರಿತ ಕಣಿವೆಗಳಲ್ಲಿ ಮತ್ತು ಇಳಿಜಾರುಗಳಲ್ಲಿದೆ.		
(ಎ.ಕೆ.ಎಸ್.)

	ಮರದ ಮೂಲಸ್ಥಾನ ಭಾರತ. ಅಸ್ಸಾಮಿನಲ್ಲಿ 1874ರಲ್ಲಿಯೇ ಇದರ ತೋಟಗಳಿದ್ದವು. ಮುಂದೆ ಮೈಸೂರು, ತಮಿಳುನಾಡುಗಳಲ್ಲೂ ಇದರ ಕೃಷಿ ಮಾಡಿದರು. ಆದರೆ ಆರ್ಥಿಕವಾಗಿ ಹೆಚ್ಚು ಲಾಭದಾಯಕವಾದ ಪ್ಯಾರಾ ರಬ್ಬರ್ ಮರ (ಹಿವಿಯ ಬ್ರೆಜಿಲಿಯನ್ಸಿಸ್) ಇಂಡಿಯ ರಬ್ಬರ ಮರದ ಸ್ಥಾನವನ್ನೂ ಆಕ್ರಮಿಸಿತು. ಆದರೂ ಅಸ್ಸಾಂ ಮತ್ತು ಬರ್ಮಗಳಲ್ಲಿ ಕೊಂಚಮಟ್ಟಿಗೆ ಇದರಿಂದ ರಬ್ಬರ್ ಪಡೆಯುವುದುಂಟು.

	ಬೀಜಗಳಿಂದ ಅಥವಾ ಕೊಂಬೆಗಳಿಂದ ಇದನ್ನು ಬೆಳೆಸಬಹುದು. ಸಸಿಗಳಿಂದ ಬೆಳೆಸಿದ ಮರಗಳು ಉತ್ತಮ ಎಂದು ಕಂಡುಬಂದಿದೆ. ಅಸ್ಸಾಮಿನಲ್ಲಿ ಮಳೆಗಾಲದಲ್ಲಿ ಬೀಜ ನೆಡುತ್ತಾರೆ. ಒಂದೆರಡು ವಾರಗಳಲ್ಲಿ ಮೊಳಕೆಯೊಡೆಯುತ್ತವೆ. ಸಸಿಗಳು 1'-2 ಎತ್ತರಕ್ಕೆ ಬೆಳೆದಾಗ ನರ್ಸರಿಗಳಿಗೆ ವರ್ಗಾಯಿಸುತ್ತಾರೆ. ಸುಮಾರು 3 ವರ್ಷಗಳಾದ ಮೇಲೆ, ಗಿಡಗಳು 10-12 ಎತ್ತರಕ್ಕೆ ಬೆಳೆದಾಗ, 30-5-0 ಅಂತರಕ್ಕೊಂದರಂತೆ ತೋಟದಲ್ಲಿ ನೆಡುತ್ತಾರೆ.

	ಕಾಂಡ ಮತ್ತು ದೊಡ್ಡ ದೊಡ್ಡ ಕೊಂಬೆಗಳಿಂದ ಸಸ್ಯಕ್ಷೀರವನ್ನು ಪಡೆಯಬಹುದು. ಕಾಂಡದ ಮೇಲೆ ಕೊಂಬೆಗಳ ಮೇಲೆ ಅಡ್ಡವಾಗಿ ಕತ್ತಿಯಿಂದ ಕೊಯ್ದು ಗಾಯಮಾಡಿ ಅಲ್ಲಿಂದ ಸೋರುವ ಕ್ಷೀರವನ್ನು ಎಲೆ ಅಥವಾ ಚಾಪೆಗಳಲ್ಲಿ ಶೇಖರಿಸುತ್ತಾರೆ. ಕೊಂಚಭಾಗ ಕೊಯ್ದಿರುವ ಜಾಗದಲ್ಲೇ ಗಟ್ಟಿಯಾಗುತ್ತದೆ. ಗಟ್ಟಿಯಾಗಿರುವುದನ್ನೂ ಚಾಪೆಗಳಲ್ಲಿ ಶೇಖರವಾಗಿರುವುದನ್ನೂ ತೆಗೆದು ಶುಚಿಮಾಡಿ ಒಣಗಿಸಿ ಉಂಡೆ ಕಟ್ಟುತ್ತಾರೆ.

	ಕ್ಷೀರ ತೆಗೆಯುವುದು ಸಾಮಾನ್ಯವಾಗಿ ಮೂರು ವರ್ಷಗಳಿಗೊಂದಾವರ್ತಿ, ಬಿಸಿಲಿನಲ್ಲಿ ಒಣಗಿದಾಗ ಕ್ಷೀರ ರಬ್ಬರ್ ಆಗುತ್ತದೆ. ಟ್ಯಾನಿಕ್ ಆಮ್ಲ ಮತ್ತು ಆಲಂ ಸೇರಿಸಿ ಇದನ್ನು ಹೆಪ್ಪುಗಟ್ಟಿಸಬಹುದು. ರಬ್ಬರಿನ ಉತ್ಪನ್ನ ಪ್ರಮಾಣದ ದೃಷ್ಟಿಯಿಂದ ನೋಡಿದರೆ ಇಂಡಿಯ ರಬ್ಬರ್ ಲಾಭದಾಯಕವಲ್ಲ. ಇದರ ಉತ್ಪನ್ನ ಒಂದು ಎಕರೆಗೆ ಸರಾಸರಿ 13-52 ಪೌಂಡ್, (ಫ್ಯಾರಾ ರಬ್ಬರ್ ಮರದ ಉತ್ಪನ್ನ ಎಕರೆಗೆ 300-450 ಪೌಂಡ್). ಅಲ್ಲದೆ ಇದರ ಸಸ್ಯಕ್ಷೀರದಲ್ಲಿ ರಾಳಪದಾರ್ಥ ಹೆಚ್ಚಾಗಿರುವುದರಿಂದ ಇದರಿಂದ ಬಂದ ರಬ್ಬರ್ ಕೆಲಕಾಲಾನಂತರ ಬಹಳ ಗಟ್ಟಿಯಾಗಿ ಬಿರುಸಾಗಿ ಬಿಡುತ್ತದೆ. ಪ್ಯಾರಾ ರಬ್ಬರ್ ಹೀಗಲ್ಲ.		 	
(ಕೆ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ